ಖಂಡಗಿರಿ-
	ಒರಿಸ್ಸ ರಾಜ್ಯದಲ್ಲಿ ಭುವನೇಶ್ವರದಿಂದ ವಾಯವ್ಯಕ್ಕೆ 5 ಮೈ. ದೂರದಲ್ಲಿರುವ ಒಂದು ಸಣ್ಣ ಗುಡ್ಡ (ಉ.ಅ. 20ಲಿ 16'; ಪೂ.ರೇ. 85ಲಿ 47). ಮರಳು ಶಿಲೆಗಳಿಂದಾದ ಈ ಗುಡ್ಡದಲ್ಲಿ ಕೊರೆಯಲಾಗಿರುವ ಜೈನವಿಹಾರಗಳು ಪಾಚೀನ ಕಾಲದಿಂದಲೂ ಜೈನರಿಗೆ ಪವಿತ್ರವಾದವು. ಇಲ್ಲಿಯ ಕೆಲವು ಗುಹೆಗಳನ್ನು ಬಿಟ್ಟರೆ ಉಳಿದ ಎಲ್ಲ ಗುಹೆಗಳೂ ಕ್ರಿ.ಶ.ದ ಪ್ರಾರಂಭಕ್ಕೆ ಸೇರಿದವು. ಈ ಗುಡ್ಡ ಚಿಕ್ಕದಾದ್ದರಿಂದ ಇಲ್ಲಿಯ ವಿಹಾರಗಳು ಪಶ್ಚಿಮ ಘಟ್ಟಗಳಲ್ಲಿ ಕೊರೆಯಲಾಗಿರುವ ವಿಹಾರಗಳಷ್ಟು ವಿಶಾಲವಾಗಿಲ್ಲ. ಇವುಗಳ ರಚನಾಕ್ರಮ ಅತ್ಯಂತ ಸರಳವಾಗಿದೆ. ಸಾಮಾನ್ಯವಾಗಿ ಒಂದು ಸಣ್ಣ ಕೋಣೆಯಿದ್ದು ಅದರ ಮುಂಭಾಗದಲ್ಲಿ ಸ್ತಂಭಗಳುಳ್ಳ ಒಂದು ಕೈಸಾಲೆ ಇರುತ್ತದೆ.

	ಖಂಡಗಿರಿಯಲ್ಲಿರುವ ಗುಹೆಗಳ (ಗುಂಫಾ) ಸಂಖ್ಯೆ ಸುಮಾರು ಹತ್ತು. ಇವುಗಳ ಪೈಕಿ ಅನಂತಗುಂಫಾ ಮುಖ್ಯವಾದ್ದು. ಇದು ಕ್ರಿ.ಶ. ಒಂದನೆಯ ಶತಮಾನಕ್ಕೆ ಸೇರಿದ್ದು. ಇತರ ಗುಹೆಗಳಂತೆ ಇದು ಕೂಡ ಅತ್ಯಂತ ಸರಳವಾಗಿದ್ದರೂ ಇಲ್ಲಿಯ ಮತೀಯ ಹಾಗೂ ಆಲಂಕಾರಿಕ ಶಿಲ್ಪಗಳು ಸಾಂಚಿಯ ಶಿಲ್ಪಗಳನ್ನು ಹೋಲುವುದು ಇದರ ವೈಶಿಷ್ಟ್ಯ. ಕೈಸಾಲೆಯ ಗೋಡೆಯ ಮೇಲೆ ಸಾಲಾಗಿ ಕಡೆದಿರುವ ಕಟಕಟೆಗಳು, ನಡುನಡುವೆ ಕಮಲದ ಹೂವುಗಳು, ಬಾಗಿಲ ಕಮಾನುಗಳ ಮೇಲಿರುವ ತ್ರಿರತ್ನ ಚಿಹ್ನೆಗಳು, ಬಾಲವನ್ನು ಹೆಣೆದುಕೊಂಡಿರುವ ನಾಗಗಳು, ಕೈಯಲ್ಲಿರುವ ಪಾತ್ರೆಯಿಂದ ಹೂವನ್ನು ಸುರಿಯುತ್ತ ಹಾರುತ್ತಿರುವ ವಿದ್ಯಾಧರರು, ಕಂಬದ ಮೇಲೆ ತಲೆಕೆಳಗಾಗಿ ಇಟ್ಟಿರುವ ಕಮಲಗಳು, ಸುಂದರ ಶಿಲ್ಪಗಳುಳ್ಳ ಬೋದಿಗೆಗಳು, ಇಷ್ಟಲ್ಲದೆ ಅನೇಕ ಗಿಡಮರಗಳ ಮತ್ತು ಪ್ರಾಣಿಗಳ ಶಿಲ್ಪಗಳು ಮಧ್ಯಭಾರತದ ಶ್ರುಂಗರ ಕಾಲದ ಸ್ತೂಪಗಳ ಮತ್ತು ವಿಹಾರಗಳ ಶಿಲ್ಪಗಳನ್ನು ಹೋಲುತ್ತವೆ. ಇದೇ ಶೈಲಿಯ ಬೋದಿಗೆಗಳು ಮತ್ತು ಅದರ ಮೇಲೆ ಕಡೆದಿರುವ ಶಿಲ್ಪಗಳು ಆರು ಶತಮಾನಗಳ ಅನಂತರ ಬಿಜಾಪುರ ಜಿಲ್ಲೆಯ ಬಾದಾಮಿಯಲ್ಲಿ ಕಂಡುಬರುವುದು ಗಮನಾರ್ಹ. ಈ ಗುಹೆಯ ಬಾಗಿಲುಗಳ ಚೌಕಟ್ಟಿನ ಮೇಲುಭಾಗದಲ್ಲಿ ಕೆತ್ತಿರುವ, ಕಮಲಾಸೀನಳಾದ ಲಕ್ಷ್ಮಿ, ರಥಾರೂಢನಾದ ಸೂರ್ಯ ಇವನ್ನು ವಿಶೇಷವಾಗಿ ಗಮನಿಸಬೇಕು. ಖಂಡಗಿರಿಯ ಜೈನರ ಈ ನಿರ್ಮಾಣಗಳು ವಾಸ್ತುಶಿಲ್ಪದ ದೃಷ್ಟಿಯಲ್ಲಿ ಅಷ್ಟೊಂದು ಶ್ರೇಷ್ಠ ಸ್ಥಾನವನ್ನು ಗಳಿಸದಿದ್ದರೂ ಅವು ತಮ್ಮದೇ ಆದ ಒಂದು ಸ್ಥಳೀಯ ರೀತಿಯನ್ನು ಪ್ರತಿನಿಧಿಸುತ್ತವೆ.		(ಎಂ.ಎಸ್.ಕೆ.ಎಂ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ